top of page

ಸಂಸ್ಥೆ ನಡೆದು ಬಂದ ದಾರಿ... 

 
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಪಡೆಯಲು ಆಗುತ್ತಿರುವ ಅನಾನುಕೂಲತೆಗಳನ್ನು ತಪ್ಪಿಸಲು ಬಿದ್ರಕಾನ ಗ್ರಾಮದ ಜನರಲ್ಲಿ ಮೂಡಿದ ಉತ್ಸಾಹದ ಫಲವಾಗಿ 1969 ನೇ ಇಸವಿಯಲ್ಲಿ ಮಹಾತ್ಮಾ ಗಾಂಧಿಯವರ ಜನ್ಮ ಶತಾಬ್ಥಿಯ ಸವಿನೆನಪಿನಲ್ಲಿ ಅವರ ಹೆಸರಿನಿಂದಲೇ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಬಿದ್ರಕಾನ ಗ್ರಾಮದಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ತದನಂತರದಲ್ಲಿ ಈ ಸಂಸ್ಥೆಯ ಆಡಳಿತದಡಿಯಲ್ಲಿ ಎಮ್.ಜಿ. ಸಿ. ಎಮ್‌. ಪ್ರೌಢ ಶಾಲೆಯನ್ನು ಬಿದ್ರಕಾನದಲ್ಲಿ ಪ್ರಾರಂಭಿಸಲಾಯಿತು.
     ಆದರೆ ಮಧ್ಯಮ ವರ್ಗದ ಕೃಷಿ ಕುಟುಂಬ ಹಾಗೂ ಕೃಷಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದು ಜನರ ಆರ್ಥಿಕ ಸ್ಥಿತಿ ಅಷ್ಟೊಂದು ಸುಭದ್ರವಾಗಿರದ ಈ ಹಳ್ಳಿಗಾಡಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಮುನ್ನೆಡೆಸುವುದು ಸುಲಭದ ಮಾತಾಗಿರಲಿಲ್ಲ. ಕಟ್ಟಡಗಳನ್ನು ಕಟ್ಟಲು, ಶಿಕ್ಷಕರ ಸಂಬಳ ಮುಂತಾದ ಖರ್ಚು ವೆ‍‍ಚ್ಚಗಳನ್ನು ಭರಿಸುವುದು ಕಠಿಣ ಕೆಲಸವಾಗಿತ್ತು. ಅಲ್ಲದೇ ಗ್ರಾಮೀಣ ಪ್ರದೇಶದ ಕೇವಲ ಎರಡೇ ಪೂರ್ಣ ಪ್ರಾಥಮಿಕ ಶಾಲೆಗಳ ವ್ಯಾಪ್ತಿಯನ್ನು ಹೊಂದಿದ ನಮ್ಮ ಶಾಲೆಗೆ ವಿದ್ಯಾರ್ಥಿಗಳ ಕೊರತೆಯಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಊರೊಳಗಿನ ಅನೇಕ ಕುಟುಂಬಗಳು ಹೊರಗಿನಿಂದ ವಿದ್ಯಾರ್ಥಿಗಳನ್ನು ಕರೆತಂದು ಪ್ರತಿ ಕುಟುಂಬದಲ್ಲಿ ಮೂರು ನಾಲ್ಕು ವಿದ್ಯಾರ್ಥಿಗಳಿಗೆ ಊಟೋಪಚಾರಗಳನ್ನು ನೀಡಿ ತೊಂದರೆಯನ್ನು ನೀಗಿಸಲು ಸಹಕರಿಸಿದರು.
    ಶಾಲೆಗೆ ಪ್ರಥಮ ಮುಖ್ಯಾಧ್ಯಾಪಕರಾಗಿ ನೇಮಕಗೊಂಡ ಶ್ರೀ ಜಿ. ಎಮ್.‌ ಚಿತ್ರಗಿಮಠ, ಗೋಕರ್ಣ ಹಾಗೂ ನಮ್ಮ ಗ್ರಾಮೀಣ ಪ್ರದೇಶದಲ್ಲೇ ಹುಟ್ಟು ಬೆಳೆದು ಉಚ್ಚ ಶಿಕ್ಷಣವನ್ನು ಹೊಂದಿ ಅದರಲ್ಲಿ ಕಷ್ಟ ಸುಖಗಳನ್ನರಿತ ಅನೇಕ ಉತ್ಸಾಹಿ ಯುವಕರು ಶಿಕ್ಷಕರಾಗಿ ಹಾಗೂ ಶಿಕ್ಷಕೇತರ ಸಿಬ್ಬಂದಿಯಾಗಿ ಸೇವೆಸಲ್ಲಿಸಲು ಮುಂದಾಗಿದ್ದಲ್ಲದೇ ಸ್ವಯಂ ಸ್ಪೂರ್ತಿಯಿಂದ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ತನು-ಮನ-ಧನದಿಂದ ಸಹಾಯ ಸಹಕಾರ ನೀಡಿದ್ದನ್ನು ಇಲ್ಲಿ ನೆನೆಸಿಕೊಳ್ಳಲೇಬೇಕು.
   ಹೀಗೆ ಅನೇಕ ಎಡರು ತೊಡರುಗಳನ್ನು ದಾಟಿ ಸದೃಢವಾಗಿ ಮುನ್ನಡೆ ಸಾಧಿಸಿರುವ ಈ ಶಿಕ್ಷಣ ಸಂಸ್ಥೆ ಇಂದು ಐವತ್ತು ವರ್ಷಗಳನ್ನು ದಾಟಿದ್ದು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.

 

MGERDI Logo Final-01.jpg
bottom of page