ನಮ್ಮ ವಿದ್ಯಾರ್ಥಿಗಳು ನಮ್ಮ ಹೆಮ್ಮೆ...! ಚಿತ್ರ ಕಲಾವಿದೆ ಪದ್ಮಶ್ರೀ ಹೆಗಡೆ
- smskeregadde
- Nov 18, 2022
- 1 min read
ನಮ್ಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿ ನಾವು ಹೆಮ್ಮೆ ಪಡುವಂತೆ ಬೆಳೆದು ನಿಂತಿದ್ದಾರೆ. ಅಂತಹ ಸಾಧಕರಲ್ಲಿ ಒಬ್ಬರು ಪದ್ಮಶ್ರೀ ಹೆಗಡೆ. ತುಪ್ಪದಜಡ್ಡಿಯ ವೆಂಕಟರಮಣ ಮತ್ತು ಭುವನೇಶ್ವರಿ ಹೆಗಡೆ ಇವರ ಮಗಳಾದ ಪದ್ಮಶ್ರೀ ಹೆಗಡೆಯವರು ಪ್ರಸ್ತುತ ಜೋಯಿಡಾ ತಾಲೂಕಿನ ಶೇವಾಳಿಯ ನಿವಾಸಿಯಾಗಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿಹೊಂದಿದ್ದ ಇವರು ಡಾ|| ಎಸ್. ಎಂ. ಪಂಡಿತ, ಚಂದ್ರನಾಥ ಆಚಾರ್ಯ, ಜಾನ್ ಫರ್ನಾಂಡಿಸ್ ಇವರಿಂದ ಸ್ಪೂರ್ತಿ ಪಡೆದು ತಮ್ಮ ಚಿತ್ರಕಲೆಯನ್ನು ಇಂದಿನವರೆಗೂ ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಹವ್ಯಾಸಿ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ರೋಟರಿ ಕ್ಲಬ್ ಬನವಾಸಿ, ಕೆನರಾ ಕಾಲೇಜು ಕುಮಟಾ, 7ನೇ ಕರ್ನಾಟಕ ಕಲಾ ಮೇಳ ಬೆಂಗಳೂರು, ಚೈತನ್ಯಮಯಿ ಆರ್ಟ ಗ್ಯಾಲರಿ ಗುಲ್ಬರ್ಗ ಸೇರಿದಂತೆ ಹಲವಾರು ಕಡೆ ಇವರ ಚಿತ್ರಗಳು ಪ್ರದರ್ಶನಗೊಂಡಿವೆ. ಏಕವ್ಯಕ್ತಿ ಚಿತ್ರ ಪ್ರದರ್ಶನದೊಂದಿಗೆ, ಇತರ ಕಲಾವಿದರೊಡಗೂಡಿ ಗುಂಪು ಚಿತ್ರಕಲಾ ಪ್ರದರ್ಶನವನ್ನು ಕೂಡ ನಡೆಸಿಕೊಟ್ಟಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಚಿತ್ರಕಲಾ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿರುವ, ಇವರ ಪ್ರತಿಭೆಯನ್ನು ಗುರುತಿಸಿದ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಗ್ರಾಮ ಪಂಚಾಯತ ಬಿದ್ರಕಾನ-ಪ್ರತಿಭಾ ಪುರಸ್ಕಾರ, ಸುಹಾಸ ಹಾಸ್ಯ ಪ್ರಿಯರ & ಲೇಖಕರ ಸಂಘ, ಉಡುಪಿ ಪ್ರತಿಭಾ ಪುಸ್ಕಾರ, ಮಂಗಳ ಕಲಾ ಸಾಹಿತ್ಯ ವೇದಿಕೆ ಇವರ ಪ್ರತಿಭಾ ಪುರಸ್ಕಾರ, ಮನಸೂರ ರಾಷ್ಟ್ರ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳು ದೊರೆತಿವೆ.
ಇದೇ ಅಕ್ಟೋಬರ್ 1 ರಂದು, ಏಶಿಯಾ ವೇದಿಕ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ವತಿಯಿಂದ ತಮಿಳುನಾಡಿನ ಹೊಸೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಪ್ರಸ್ತುತ ಇವರು, ಇಂಡಿಯನ್ ರಾಯಲ್ ಅಕಾಡೆಮಿ ಆಫ್, ಆರ್ಟ್ ಎಂಡ್ ಕಲ್ಚರ್ ನ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ದೇಶ-ವಿದೇಶಗಳಲ್ಲಿ, ಇವರ ಕಲೆಗೆ ಗೌರವಾದರಗಳು ಸಿಗಲಿ ಎನ್ನುವ ಆಶಯ ನಮ್ಮದು.
Comments